ಶನಿವಾರ, ಜೂನ್ 26, 2010

ಮಳೆ ಎಂದರೆ ಸಂಭ್ರಮಪಡುವಂತೆ ಮಾಡಿದ್ದು ನೀನಲ್ಲವೇ?

ಮಳೆಯ ನೆನಪಲ್ಲಿ ಇನಿಯನಿಗೊಂದು ಪತ್ರ...
ಪ್ರಿಯ ಗೆಳೆಯಾ,
ನಮ್ಮೂರಲ್ಲಿ ಮುಂಗಾರು ಪ್ರಾರಂಭಗೊಂಡಿದೆ. ಮೋಡಗಳಿಂದ ಸುರಿಯುವ ಮಾಯಾವಿ ‘ಮಳೆ’ ಎಂದರೆ ನನಗದು ವರ್ಣಿಸಲಾಗದ ಭಾವನೆಗಳೇ ತುಂಬಿರುವ ಸವಿ ನೆನಪು. ಮಳೆ ಬರುವಂತಾದರೆ ಸಾಕು, ಮನಸ್ಸು ನಿನ್ನ ನೆನಪುಗಳನ್ನು ಹೊತ್ತು ಸಾಗುತ್ತದೆ. ನಮ್ಮಿಬ್ಬರ ಸ್ನೇಹದ ಸಾಲುಗಳನ್ನು ಕಣ್ಮುಂದೆ ಸಾಗುತ್ತವೆ ನನಗೆ.
ತಂಪಾದ ಗಾಳಿ, ದೂರಲ್ಲಿ ಎಲ್ಲೋ ಮಳೆ ಬಂದಂತಹ ಮಣ್ಣಿನ ವಾಸನೆ, ಕಪ್ಪು ಮೋಡಗಳ ಸಾಲುಗಳು ಕಂಡರೆ ಸಾಕು ನನಗೆ, ಬೇಗನೆ ಮನೆಗೆ ಸೇರುವ ತವಕ. ಅಮ್ಮನ ಹತ್ತಿರ ಬೈಯಿಸಿಕೊಳ್ಳುವುದನ್ನು ನೆನಪಿಸಿಕೊಂಡು, ಒಣಗಿದ ಬಟ್ಟೆಗಳನ್ನು ಬುಟ್ಟಿಗೆ ತುಂಬಿಕೊಂಡು, ಗೆಳತಿಯರೊಂದಿಗೆ ಮನೆಯತ್ತ ಹೆಜ್ಜೆ ಹಾಕುತ್ತಿದ್ದವಳು ನಾನು...
ಮಳೆಯಲ್ಲಿ ನೆನಯುತ್ತಾ ನಿಲ್ಲುವ ನಿನ್ನ ಹುಚ್ಚುತನ ನೋಡಿ ನಗುತ್ತಿದ್ದ ನನಗೆ, ಮಳೆ ಎಂದರೆ ಸಂಭ್ರಮ ಪಡುವಂತೆ ಮಾಡಿದ್ದು ನೀನಲ್ಲವೇ? ಅದೊಂದು ದಿನ, ಕೆರೆಯಿಂದ ಹೊರಟಾಗ ‘ಮಳೆರಾಯ’ ಬಾರದಿದ್ದರೆ! ನೀನು ಛತ್ರಿಯ ಆಸರೆಯೊಂದಿಗೆ ನನ್ನೊಂದಿಗೆ ಬರುತ್ತಿದ್ದೆಯಾ? ಗೆಳೆಯಾ...
ಮಳೆಯಿಂದಲೇ ಆರಂಭವಾಗಿರುವ ನಮ್ಮ ಸ್ನೇಹಕ್ಕೀಗ ವರುಷದ ಸಂಭ್ರಮ. ಮತ್ತೀಗ ಮಳೆಗಾಲ ಆರಂಭಗೊಂಡಿದೆ. ಮಳೆಯ ಮೋಡಗಳ ಆಗಮನ, ಬೀಸುತ್ತಿರುವ ತಂಗಾಳಿ, ದೂರದಿಂದ ಬರುತ್ತಿರುವ ಮಣ್ಣಿನ ವಾಸನೆ, ನಿನ್ನ ಸವಿ ನೆನಪನ್ನು ಹೊತ್ತು ತರುತ್ತಿವೆ ನನಗೆ.
ಮಳೆ ಮೋಡಗಳನ್ನು ಹೊತ್ತ ಸುತ್ತಲಿನ ಬೆಟ್ಟಗಳ ಸಾಲುಗಳ ಶೃಂಗಾರ, ಕೆರೆಯ ನೀರಿನಲ್ಲಿ ಮೀನನ್ನು ಹುಡುಕುವ ಪಕ್ಷಿಗಳ ಕಲರವ, ಕೆರೆಯ ದಡದಲ್ಲಿ ನಮ್ಮಿಬ್ಬರ ಮಾತಿಗೆ ಹೂಗುಡುತ್ತಿದ್ದ ಹಕ್ಕಿಗಳ ಇಂಪಾದ ಧ್ವನಿ. ಸಣ್ಣದಾಗಿ ಸುರಿಯುತ್ತಿದ್ದ ಮಳೆಯಲ್ಲೇ ಕೆರೆಯ ಏರಿಯಲ್ಲಿ ನಾವಿಬ್ಬರೂ ಕೈಹಿಡಿದು, ಹೆಜ್ಜೆ ಹಾಕುತ್ತಿದ್ದ ರೀತಿ ಎಂತಹ ಅಮೋಘ ಅನುಭವ.
ನಮ್ಮೂರಲ್ಲಿ ಇಂದು ಮಳೆ ಬಂದಿದೆ ಕಣೋ, ಅದಕ್ಕೇ ಇಷ್ಟೆಲ್ಲಾ ಮಾತು ನನ್ನದು. ಮಳೆಯಲ್ಲಿ ನೆನೆಯುತ್ತಾ ಏನು ಮಾಡುತ್ತಿರುವೆ ನೀನು, ಒಳಗೆ ಬಾರೆ ಅಂದಾಗಲೇ ನಾನು ವಾಸವಕ್ಕೆ ಬಂದಿದ್ದು ಇವತ್ತು. ಮಳೆ ಅಂದರೆ ಒಳ ಸೇರುತ್ತಿದ್ದವಳು, ನೀನಗೇನಾಗಿದೆಯೇ ಎಂದು ಅಮ್ಮ ಬೈಯುತ್ತಿದ್ದಾರೆ. ಅವರಿಗೇನು ಗೊತ್ತು ಮಳೆಯಲ್ಲಿ ‘ನಿನ್ನ’ ಕನಸು ಕಾಣುತ್ತಿರುವೆನೆಂದು ಅಲ್ಲವೇ?
ನಾವಿಬ್ಬರೂ ಕೈಹಿಡಿದು ಸಾಗುತ್ತಿದ್ದ ಕೆರೆ ಏರಿಯಲ್ಲಿ ಒಬ್ಬಳೆ ಸಾಗಲು ನನಗೇನೋ ಬೇಜಾರು ಕಣೋ, ಕಪ್ಪು ಮೋಡದ ಮುಂದಿರುವ ಕಾಮನಬಿಲ್ಲು ಎಷ್ಟೊಂದು ಸುಂದರವಾಗಿತ್ತು ಗೊತ್ತಾ? ನಮ್ಮಿಬ್ಬರ ಪ್ರೇಮದ ದಾರಿಗೆ ಬಣ್ಣ ತುಂಬಿದ್ದ ಅದನ್ನೇ ನೋಡುತ್ತಾ ನಿಂತಿದ್ದೆ ಇವತ್ತು.
ಮಳೆ ಕುರಿತು ಪತ್ರ ಬರೆದರೆ ಸಾಕೆನಿಸುತ್ತಿಲ್ಲ ನನಗೆ, ಬೇಗನೆ ಮುಗಿಯದ ದಾರಿಯಲ್ಲಿ, ತುಂತುರು ಮಳೆಯಲ್ಲಿ ನಿನ್ನೊಂದಿಗೆ ನಡೆಯುವಾಸೆ ತುಂಬಿ ಬಂದಿದೆ ನನಗೆ. ಯಾವಾಗ ಬರುತ್ತೀಯಾ ಅನ್ನೊದನ್ನ ಈಗ್ಲೇ ಹೇಳೋ ಪ್ಲೀಸ್‌...
ನಿನ್ನ ಪ್ರೀತಿಯ -ಮಳೆ ಹುಡುಗಿ
chandru27pvr@gmail.com

2 ಕಾಮೆಂಟ್‌ಗಳು: